ಪರೀಕ್ಷಿತ್ -
	ಈ ಹೆಸರಿನಿಂದ ರಾಜರು ಐದು ಮಂದಿ ಇದ್ದಾರೆ. 1 ವೈದಿಕ ಕಾಲದ ರಾಜ. ಇವನ ರಾಜ್ಯದ ಶಾಂತಿ ಸಮೃದ್ಧಿಯ ಬಗ್ಗೆ ಅಥರ್ವವೇದದಲ್ಲಿ ಉಲ್ಲೇಖವಿದೆ. ಪಾರಿಕ್ಷಿತ್ಯ ಮಂತ್ರ ಎಂಬ ರೂಪದಲ್ಲಿ ಇವನ ಪ್ರಶಸ್ತಿಯ ಮಂತ್ರ ಪ್ರಸಿದ್ಧವಾಗಿದೆ.

	2 ಚಂದ್ರವಂಶದ ರಾಜ ಅನಶುಷ. ರಾಣಿ ಅಮೃತಾದೇವಿಯರ ಮಗ. ಶಂತುವಿನ ಮುತ್ತಜ್ಜ. ಈತನ ಪತ್ನಿ ಸುವೇಷೆ. ಮಗ ಭೀಮಸೇನ.

	3 ಚಂದ್ರವಂಶದ ಅವಿಕ್ಷಿತ ರಾಜನ ಮಗ. ಶಬಲಾಶ್ವ. ಆದಿರಾಜ, ವಿರಾಜ, ಶಾಲ್ಮಲಿ, ಉಚ್ಚೈಶ್ಯ್ರವ, ಭಂಗಾರಕ, ಜಿತಾರಿ ಎಂಬುವರು. ಒಡಹುಟ್ಟಿದವರು. ತಕ್ಷಸೇನ ಮೊದಲಾದವರು ಮಕ್ಕಳು.

	4 ಸೂರ್ಯವಂಶದ ರಾಜ. ಬೇಟೆಗೆ ಹೋಗಿದ್ದಾಗ ಕಂಡ ಮಂಡೂಕ ರಾಜ ಆಯುವಿನ ಪುತ್ರಿ ಸುಶೋಭನೆಯನ್ನು ಮೋಹಿಸಿದ. ಎಂದಿಗೂ ನನ್ನನ್ನು ನೀರಿನಲ್ಲಿ ಇಳಿಸದಂತೆ ನೋಡಿಕೊಳ್ಳುವುದಾದರೆ ನಿನ್ನನ್ನು ವರಿಸಬಲ್ಲೆ ಎಂಬ ಅವಳ ಮಾತಿಗೆ ಒಪ್ಪಿ. ಮದುವೆಯಾಗಿ ಶಲ, ಬಲ, ದಲರೆಂಬ ಮಕ್ಕಳನ್ನು ಪಡೆದ. ಪತ್ನಿಗೆ ಕೊಟ್ಟಿದ್ದ ಮಾತನ್ನು ಮರೆತು ಒಮ್ಮೆ ಆಕೆಯೊಂದಿಗೆ ಜಲಕೇಳಿಗೆ ಸರೋವರದಲ್ಲಿ ಇಳಿದ. ಕೂಡಲೇ ಆಕೆ ಮಾಯವಾದಳು. ಕ್ರುದ್ಧನಾದ ರಾಜ ದೊತರ ಮೂಲಕ ಕೊಳವನ್ನೆಲ್ಲ ಹುಡುಕಿಸಿ, ಕಡೆಗೆ ಅಲ್ಲಿದ್ದ ಕಪ್ಪೆಗಳ ಮೇಲೆ ಸಂಶಯ ತಾಳಿ ಅವುಗಳನ್ನೆಲ್ಲ ಕೊಲ್ಲತೊಡಗುವಷ್ಟರಲ್ಲಿ ಆಯುವೇ ಬಂದು ತನ್ನ ಮಗಳು ಸುಶೋಭನೆ ಇದೇ ರೀತಿ ಅನೇಕ ರಾಜಪುತ್ರರನ್ನು ಮೋಸಗೊಳಿಸಿರುವುದನ್ನು ತಿಳಿಸಿ, ಪರೀಕ್ಷಿತನ ಬಲಾತ್ಕಾರದಿಂದ ಮತ್ತೆ ಆಕೆಯನ್ನು ಆತನಿಗೆ ತಂದುಕೊಟ್ಟ.

	5 ಚಂದ್ರವಂಶದ ರಾಜ. ಅರ್ಜುನನ ಮೊಮ್ಮಗ. ಅಭಿಮನ್ಯು ಉತ್ತರೆಯರ ಮಗ. ಕೃಪಾಚಾರ್ಯ ಇವನ ಅಸ್ತ್ರವಿದ್ಯಾಗುರು. ಗರ್ಭದಲ್ಲಿರುವಾಗಲೇ ಅಶ್ವತ್ಥಾಮನ ಬ್ರಹ್ಮಾಸ್ತ್ರದಿಂದ ಸತ್ತು ಶ್ರೀಕೃಷ್ಣನ ಮಹಿಮೆಯಿಂದ ಮತ್ತೆ ಬದುಕಿಕೊಂಡವನಾದ್ದರಿಂದ ಇವನಿಗೆ ವಿಷ್ಣುರಾತ ಎಂಬ ಹೆಸರೂ ಇದೆ. ಉತ್ತರನ ಮಗಳು ಭದ್ರವತಿಯನ್ನು (ಇರಾವತಿ) ಮದುವೆಯಾಗಿ ಜನಮೇಜಯ. ಶ್ರುತಸೇನ, ಉಗ್ರಸೇನ, ಭೀಮಸೇನರೆಂಬ ಮಕ್ಕಳನ್ನು ಪಡೆದ. ಭಾಗವತದ ಪ್ರಕಾರ-ಈತ ಗರ್ಭದಲ್ಲಿ ಇರುವಾಗಲೇ ಪರಮಾತ್ಮ ದರ್ಶನವನ್ನಿತ್ತು ಕಾಪಾಡಿದ್ದರಿಂದ ಭಗವಂತ ಸರ್ವವ್ಯಾಪಕ. ಸರ್ವಚರಾಚರ ಸ್ವರೂಪನೆಂಬ ಭಾವ ಇವನಿಗೆ ಜನ್ಮಸಿದ್ಧವಾಯಿತು. ಇದರಿಂದಲೇ ಪರೀಕ್ಷತನೆಂದು ಹೆಸರು. ಭಾರತದ ಪ್ರಕಾರ ವಂಶ ಪರಿಕ್ಷೀಣವಾಗಿದ್ದಾಗ ಹುಟ್ಟಿದನಾದುದರಿಂದ ಪರೀಕ್ಷಿತನೆಂದು ಹೆಸರು. ಒಮ್ಮೆ ಶೂದ್ರನೊಬ್ಬ ರಾಜಚಿಹ್ನೆಗಳನ್ನು ಧರಿಸಿ ಒಂದು ಗೋವು ಹಾಗೂ ಒಂದು ವೃಷಭವನ್ನು ಹಿಂಸಿಸುತ್ತಿದ್ದುದನ್ನು ಕಂಡು ಆ ಗೋವೇ ಭೂದೇವಿ, ಆ ಪುರುಷನೇ ಕಲಿಪುರಷ, ಆ ವೃಷಭವೇ ಧರ್ಮವೆಂದು ತಿಳಿದು ಶೂದ್ರರಾಜನನ್ನು ಹಿಡಿದು ದಂಡಿಸತೊಡಗಿದ. ಆಗ ಅವನು ಕಲಿಯ ಮರೆಹೊಕ್ಕು ಪ್ರಾಣಸಹಿತವಾಗಿ ಓಡಿಹೋದ. ಪರೀಕ್ಷಿತ ಮೂರು ಭಾರಿ ಅಶ್ವಮೇಧ ಯಾಗ ಮಾಡಿದ. ಈತ ನೀತಿವಂತ, ಧಾರ್ಮಿಕ ಹಾಗೂ ಬ್ರಾಹ್ಮಣಭಕ್ತ. ಒಮ್ಮೆ ಬೇಟೆಗೆ ಹೋಗಿದ್ದಾಗ ಬಾಯಾರಿ ನೀರು ಕುಡಿಯಲು ಶಮೀಕ ಮುನಿಯ ಆಶ್ರಮವನ್ನು ಹೊಕ್ಕ. ಸಮಾಧಿಸ್ಥನಾದ ಮುನಿ ಈತನನ್ನು ಗಮನಿಸಲಿಲ್ಲ. ಬೇರಾರೂ ಆಶ್ರಮದಲ್ಲಿರಲಿಲ್ಲ. ಕ್ರುದ್ಧನಾದ ಪರೀಕ್ಷಿತ ಬಳಿಯಲ್ಲೇ ಸತ್ತುಬಿದ್ದಿದ್ದ ಒಂದು ಹಾವನ್ನು ಮಾಲೆಯಾಗಿ ಮುನಿಯ ಕೊರಳಿಗೆ ಹಾಕಿ ಹೋದ. ಸ್ವಲ್ಪಹೊತ್ತಿನಲ್ಲಿಯೇ ಅಲ್ಲಿಗೆ ಬಂದ ಮುನಿಪುತ್ರ ಶೃಂಗಿ-ನಮ್ಮ ತಂದೆಯ ಕೊರಳಿಗೆ ಸತ್ತಹಾರವನ್ನು ಹಾಕಿ ಬ್ರಾಹ್ಮಣ ಸಂತತಿಗೇ ಅವಮಾನವನ್ನು ಮಾಡಿದವ ಇಂದಿಗೆ ಏಳು ದಿನಗಳೊಳಗಾಗಿ ತಕ್ಷಕನಿಂದ (ಸರ್ಪರಾಜ) ಸಾಯಲಿ ಎಂದು ಶಾಪವಿತ್ತ. ಸಮಾಧಿಯಿಂದ ಎಚ್ಚೆತ್ತ ಮುನಿ ಮಗನ ಅವಿವೇಕಕ್ಕೆ ಚಿಂತಿಸಿ, ತನ್ನ ಶಿಷ್ಯನನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ, ಶೃಂಗಿಯ ಶಾಪವನ್ನು ಅವನಿಗೆ ತಿಳಿಸಿ, ಅದಕ್ಕೆ ತಕ್ಕ ಪ್ರತೀಕಾರ ಮಾಡಿಕೊಳ್ಳುವಂತೆ ಹೇಳಿ ಕಳುಹಿಸಿದ. ಪರೀಕ್ಷಿತ ಒಡನೆಯೇ ತನ್ನ ದುಷ್ಕಾರ್ಯಕ್ಕೆ ಮರುಗಿ ಸರ್ಪಗಳು ಬರಲು ಆಗದಂತೆ ಸಮುದ್ರದ ನಡುವೆ ಒಂದು ಎತ್ತರವಾದ ಸ್ಥಳದಲ್ಲಿ ಪ್ರಾಯೋಪವಿಷ್ಟನಾಗಿ ಶುಕಮುನಿಯಿಂದ ಭಾಗವತ ಶ್ರವಣ ಮಾಡಿಸುತ್ತಿದ್ದ. ಕಡೆಗೆ ಏಳನೆಯ ದಿನ ಈತನನ್ನು ನೋಡಲು ಬಂದ ಬ್ರಾಹ್ಮಣರು ಕೊಟ್ಟ ಹಣ್ಣಿನಲ್ಲಿ ತಕ್ಷಕ ಸೂಕ್ಷ್ಮ ರೂಪದಿಂದ ಸೇರಿದ್ದ. ಹಣ್ಣನ್ನು ಪರೀಕ್ಷಿತ ಮೂಸುತ್ತಿರುವಾಗ ಅದರಿಂದ ಹೊರಬಂದ ತಕ್ಷಕ ಇವನನ್ನು ಕಚ್ಚಿ ಕೊಂದ.

	ಪಾಂಡವರ ಮಹಾಪ್ರಸ್ಥಾನದ ತರುವಾಯ ಪರೀಕ್ಷಿತ ಭರತಖಂಡವನ್ನು ಏಕಚತ್ರಾಧಿಪತಿಯಾಗಿ ಆಳಿದ. ಪರೀಕ್ಷಿತ ಅರವತ್ತು ವರ್ಷಕಾಲ ರಾಜ್ಯವಾಳಿದ. ಇವನ ರಾಜ್ಯದಲ್ಲಿ ರಾಮರಾಜ್ಯ ನೆಲಸಿತ್ತು. ಇವನ ಆಳ್ವಿಕೆಯಿಂದ ಕಲಿಯುಗದ ಪ್ರಾರಂಭವಾಯಿತೆನ್ನಲಾಗಿದೆ.
(ಎಸ್.ಆರ್.ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ